ಹೂವು ಹೊರಳುವವು
ಚೆನ್ನವೀರ ಕಣವಿ
ಹೂವು ಹೊರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ || ಪ ||
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣದೋಷಗಳಂಟಿಸಿ
ಬಿಡಿಸಿಬಿಟ್ಟ ತೊಡಕು ||
ಗಿಡದಿಂದುರುವ ಎಲೆಗಳಿಗೂ ಮುದ
ಚಿಗುರುವಾಗಲು ಒಂದೇ ಹದ
ನೆಲದ ಒಅಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನೋ ಕಲಾವಿದ ||
ಬಿಸಿಲ ಧಗೆಯ ಬಸಿರಿಂದಲೆ ಸುಳಿವುದು
ಮೆಲು ತಂಗಾಳಿಯು ಒಳಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾ ಗಳಿಗೆ ||
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ ||